ತೆಲುಗು ಜಂಗಮರು
ಏಕತಾರಿಯೊಡನೆ ತತ್ತ್ವದ ಪದಗಳನ್ನು ಹೇಳುತ್ತ ಊರು ಊರುಗಳ ಮೇಲೆ ಸುತ್ತುವ ಲೌಕಿಕ ವೃತ್ತಿ ಗಾಯಕರು. ಇವರನ್ನು ತುಮಕೂರು ಜಿಲ್ಲೆಯಲ್ಲಿ ವಿಶೇಷವಾಗಿ ಕಾಣಬಹುದು. ಮನೆಮಾತು ತೆಲುಗು ಭಾಷೆಯಾದರೂ ಇವರು ಹಾಡುಗಳ ಭಾಷೆ ಕನ್ನಡ. ಇವರು ಬಳಸುವ ವಾದ್ಯ ಏಕತಾರಿ ಹಾಗೂ ಬಟ್ಟುತಾಳ, ಕೆಲವೊಮ್ಮೆ ಬಟ್ಟುತಾಳಕ್ಕೆ ಬದಲಾಗಿ ಚಿಟಗಿಯನ್ನೂ ಬಳಸುತ್ತಾರೆ. ತೆಲುಗು ಜಂಗಮರು. ತೆಲುಗು ಬಣಜಿಗರು (ನೋಡಿ- ತೆಲುಗು-ಬಣಜಿಗರು) ಹಾಗೂ ದೊಂಬಿದಾಸರು _ ಈ ಮೂವರು ಲೌಕಿಕ ವೃತ್ತಿಗಾಯಕರು. ಆಡುವ ಭಾಷೆ, ಹಾಡುವ ಧಾಟಿ, ಕಾವ್ಯಗಳ ಸಾಹಿತ್ಯ, ಬಳಸುವ ವಾದ್ಯಗಳಲ್ಲಿ ಬಹಳಷ್ಟು ಸಾಮ್ಯತೆಯಿದೆ. ಈ ಮೂರು ಸಂಪ್ರದಾಯದ ಲೌಕಿಕ ವೃತ್ತಿಗಾಯಕರನ್ನು ಜಾತಿಗಳ ಹೆಸರಿನಿಂದ ಬೇರೆ ಬೇರೆಯಾಗಿ ಗುರುತಿಸಲಾಗಿದ್ದರೂ ಇವರೆಲ್ಲರೂ ಒಂದೇ ಮೂಲದಿಂದ ಬಂದವರೆಂದು ಹೇಳಬೇಕಾಗುತ್ತದೆ.

ಇವರ ಹೆಸರೇ ಹೇಳುವಂತೆ ತೆಲುಗು ಭಾಷೆಯನ್ನಾಡುವವರು ಹಾಗೂ ವೀರಶೈವರು. ಆದರೆ ಇವರು ತಮ್ಮನ್ನು ವೀರಶೈವರೆಂದೂ ಹೇಳಿಕೊಳ್ಳುವುದಿಲ್ಲ. ಜೊತೆಗೆ ಇವರು ಮಾಂಸಾಹಾರಿಗಳು. ಈ ವೃತ್ತಿಗಾಯಕರು 23 ನೆಯ ಪಟ್ಟದ ಕಟ್ಟಿಗೆ ಹಳ್ಳಿ ಸಿದ್ಧವೀರಸ್ವಾಮಿಗಳ ಕಾಲದಲ್ಲಿ ವೀರಶೈವ ಮತಕ್ಕೆ ಸೇರಿದ್ದ ತೆಲುಗು ಬಣಜಿಗರೆಂದೂ ಆ ಧರ್ಮವನ್ನು ತೊರೆದು ವೈಷ್ಣವ ಧರ್ಮವನ್ನು ಅವಲಂಬಿಸಿದರೆಂದೂ ಅಲ್ಲಿಯೂ ಅತೃಪ್ತರಾದ ಕೆಲವು ಮತ್ತೆ ವೀರಶೈವ ಮತಕ್ಕೆ ಮತ್ತೆ ಬರಲೊಪ್ಪಿದರೆಂತಲೂ ಆಗ ಅವರಿಗೆ ನೀವು ಲಿಂಗವಂ ಬಿಟ್ಟ ಕಾರಣದಿಂದ ನಿಮಗೆ ಲಿಂಗಮಂ ಕೊಡುವುದಕ್ಕೆ ಬರುವುದಿಲ್ಲವೆಂದು ಅಪ್ಪಣೆಯಂ ಕೊಟ್ಟು ಭಸ್ಮ, ರುದ್ರಕ್ಷಿ, ಪಂಚಾಕ್ಷರ ಮಂತ್ರವಂ ಕೊಟ್ಟು ಉದ್ಧಾರವಂ ಮಾಡಿದರು ಎಂಬುದಾಗಿ ಗುರುಗಳು ಅಪ್ಪಣೆ ಕೊಡಿಸಿದರೆಂದೂ ಹೇಳಲಾಗಿದೆ. ಈ ವಿಚಾರ ನಿರಂಜನ ವಂಶ ರತ್ನಾಕರ ಗ್ರಂಥದಿಂದ ತಿಳಿದುಬರುತ್ತದೆ. ಹಿಂದಿನಿಂದ ಇವರು ವೀರಶೈವರಂತೆ ಲಿಂಗವನ್ನು ಧರಿಸದಿದ್ದರೂ ಶಿವಾತಾಧಕರಾದ ತೆಲುಗು ಜಂಗಮರೆಂಬ ಹೆಸರಿನಿಂದ ಉಳಿದಿದ್ದಾರೆ. ಮೂಲದಲ್ಲಿ ಇವರು ಏಕತಾರಿಯೊಡನೆ ತತ್ತ್ವದ ಪದಗಳನ್ನು ಹೇಳುತ್ತ ಊರು ಊರುಗಳ ಮೇಲೆ ಸುತ್ತುತ್ತಿದ್ದು ಕ್ರಮೇಣ ಜೀವನ ನಿರ್ವಹಣೆಗಾಗಿ ಕೆಲವು ಕಥೆಗಳನ್ನು ಹಾಡಲು ಕಲಿತರೆಂದು ಕಾಣುತ್ತದೆ. ಶೈವಧರ್ಮದಿಂದ ವೈಷ್ಣವಧರ್ಮಕ್ಕೆ ಬಂದು ಮತ್ತೆ ಶೈವಧರ್ಮಕ್ಕೆ ಹಿಂತಿರುಗಲು ಹಾತೊರೆದು ಇವರು ಎರಡೂ ಕಡೆಯಿಂದಲೂ ವಂಚಿತರಾಗಿ ಕೊನೆಗೆ ಭಿಕ್ಷುಕರಾಗಿಯೇ ಉಳಿದಂತೆ ಕಾಣುತ್ತದೆ. ಇತ್ತೀಚೆಗೆ ಬೇಸಾಯ ಮುಂತಾದ ಬೇರೆ ಬೇರೆ ವೃತ್ತಿಗಳನ್ನೂ ಇವರು ಅವಲಂಬಿಸಿದ್ದಾರೆ.

ಇವರ ಕುಲದೇವತೆಗಳು ವೀರಭದ್ರಸ್ವಾಮಿ ಮತ್ತು ಗಂಗಮ್ಮ. ಮನೆದೇವತಗಳು ನಂಜುಂಡೇಶ್ವರ ಹಾಗೂ ಸುಬ್ರಹ್ಮಣ್ಯ. ಆಂಧ್ರದ ಚಿತ್ತೂರಿನ ಕುಳ್ಳಂಪಲ್ಲಿಯ ವೀರಭದ್ರಸ್ವಾಮಿ ಮಠಕ್ಕೆ ಇವರು ನಡೆದುಕೊಳ್ಳುತ್ತಾರೆ. ಈ ಮಠದ ಗುರುಗಳು ಮೂರು ನಾಲ್ಕು ವರ್ಷಗಳಿಗೊಮ್ಮೆ ಇವರು ಇರುವೆಡೆಗಳಿಗೆಲ್ಲ ಬಂದು ಕಾಣಿಕೆಗಳನ್ನು ಸ್ವೀಕರಿಸುತ್ತಾರೆ. ಈ ಗುರುಗಳಿಂದಲೇ ಲಿಂಗದೀಕ್ಷೆಯೂ ಆಗುತ್ತದೆ. ಈ ಜನ ಸೋಮವಾರದ ದಿನಗಳಲ್ಲಿ ಪೂಜಾ ಸಮಯದಲ್ಲಿ ಮಾತ್ರ ಲಿಂಗವನ್ನು ಧರಿಸಿಕೊಳ್ಳುತ್ತಾರೆ. ಉಳಿದ ದಿನಗಳಲ್ಲಿ ಲಿಂಗವನ್ನು ದೇವರ ಗದ್ದಿಗೆಯ ಮೇಲಿಟ್ಟು ಪೂಜಿಸುತ್ತಾರೆ. ಶಿವರಾತ್ರಿಯ ದಿನ ಲಿಂಗ ಧರಿಸಿಕೊಂಡು ಉಪವಾಸ ಜಾಗರಣೆಗಳಿಂದ ಶಿವನನ್ನು ಆರಾಧಿಸುತ್ತಾರೆ. ಉಳಿದ ಹಬ್ಬಗಳನ್ನು ಇತರರಂತೆ ಆಚರಿಸುತ್ತಾರೆ. ಮಾರಿಹಬ್ಬದಲ್ಲಿ ಹುರುಳಿಕಾಳನ್ನು ಬೇಯಿಸಿ ಕಾಯಿಹಾಲಿನ ಜೊತೆಯಲ್ಲಿ ಎಡೆ ಮಾಡುತ್ತಾರೆ. ಮಾರಿಗೆ ಮರಿಯನ್ನು ಬಲಿ ಕೊಟ್ಟು ಕಂಟು ಮಾಡುತ್ತಾರೆ - ಎಂದರೆ ಅದನ್ನು ಪಂಜುಗಳಿಂದ ಸೀಯುತ್ತಾರೆ. ಇದರಲ್ಲಿ ಮಡಿವಾಳಗೆ ಮುಂಡ ಕುಳವಾಡಿಗ ರುಂಡವನ್ನು ಕೊಟ್ಟು ಬಿಡುತ್ತಾರೆ. ತುಮಕೂರು ಜಿಲ್ಲೆಯ ಸುತ್ತಿನಲ್ಲೆಲ್ಲ ನಡೆಯುವ ಕಾರಹಬ್ಬವನ್ನು ಇವರೂ ಆಚರಿಸುತ್ತಾರೆ.

ತೆಲುಗು ಜಂಗಮರ ಆಚಾರ ವಿಚಾರ ನಂಬಿಕೆ ನಡಾವಳಿಗಳು ವಿಶಿಷ್ಟವಾದವು. ಅವರಲ್ಲಿ ಹೆಣ್ಣುಮಕ್ಕಳು ಋತುಮತಿಯರಾದಾಗ ಮೂರು ದಿನಗಳವರೆಗೆ ಮನೆಯಿಂದ ಹೊರಗಿರಿಸುತ್ತಾರೆ. ಈ ಮೂರು ದಿನಗಳಲ್ಲಿ ಸೋದರಮಾವನಾದವ ಅತ್ತಿಕೊನೆ, ಕಳ್ಳಿಕೊನೆ, ತೆಂಗಿನಸೋಗೆಗಳಿಂದ ಒಂದೊಂದು ಗುಡಿಲು ಹಾಕುತ್ತಾನೆ. ಪ್ರತಿದಿನವೂ ಋತುವಾದವಳನ್ನು ಮೂರು ಜನ ಮುತ್ತೈದೆಯರು ಸ್ನಾನ ಮಾಡಿಸಿ ಹಸೆ ಕೂರಿಸುತ್ತಾರೆ. ಈ ಶಾಸ್ತ್ರವನ್ನು ಹೊರ ಒಸಗೆ ಎಂದು ಕರೆಯುತ್ತಾರೆ. ಐದನೆಯ ದಿನ ಸ್ನಾನ ಮಾಡಿಸಿ ಒಳಕ್ಕೆ ಕರೆದುಕೊಳ್ಳುತ್ತಾರೆ. ಚಿಗಣಿ, ತಂಬಿಟ್ಟು, ಕೊಬರಿ, ಹೂವು ಎಲೆ ಅಡಿಕೆಗಳನ್ನು ಮಡಿಲು ತುಂಬುವ ಈ ಹಸೆಯನ್ನು ನಡುಮನೆ ಒಸಗೆ ಎಂದು ಕರೆಯುತ್ತಾರೆ. ಹನ್ನೆರಡನೆಯ ದಿನಕ್ಕೆ ಮತ್ತೆ ಹಸೆ ಕೂರಿಸಿ ನೆಂಟರಿಷ್ಟರನ್ನು ಕರೆದು ಊಟ ಹಾಕುತ್ತಾರೆ. ಇದನ್ನು ದೊಡ್ಡ ಒಸಗೆ ಎಂದು ಕರೆಯುತ್ತಾರೆ. ಮೂರು ತಿಂಗಳಾದ ಮೇಲೆ ಅರಿಶಿನ, ಕುಂಕುಮ, ಹೂವು, ಕಾಯಿ, ಕರ್ಪೂರ, ಹಣ್ಣು, ಹೊಸ ಸೀರೆ, ರವಿಕೆ ಕಣಗಳನ್ನು ತೆಗೆದುಕೊಂಡು ಹೋಗಿ ಗಂಗೆ ಪೂಜೆ ಮಾಡಿಕೊಂಡು ಬರುತ್ತಾರೆ. 

ಮದುವೆ ಕಾರ್ಯಗಳಲ್ಲಿ ಗಂಡಿನ ಮನೆಯವರು ಹೆಣ್ಣಿನ ಮನೆಗೆ ಬಂದು ಹೆಣ್ಣನ್ನು ಒಪ್ಪಿದ ಮೇಲೆ ಹೆಣ್ಣಿನವರು ಗಂಡಿನ ಮನೆಗೆ ಬರುತ್ತಾರೆ. ಲಗ್ನ ಕಟ್ಟಿಸುವ ದಿನ ಗಂಡಿನ ಮನೆಯವರು ಮಂಗಳದ್ರವ್ಯಗಳೊಡನೆ ಬಂದು ಹೆಣ್ಣಿನ ಮನೆಯಲ್ಲಿ ಹಚ್ಚಿಟ್ಟಿರುವ ದೀಪಕ್ಕೆ ಪೂಜೆ ಮಾಡಿ ಒಂದು ನಾಣ್ಯವನ್ನು ಕಾಣಿಕೆಯಿಡುತ್ತಾರೆ. ಅಂದು ಹೆಣ್ಣಿನ ಮನೆಯವರು ಸೀ ಊಟ ಇಕ್ಕಿ ತುಪ್ಪ ಬಡಿಸುತ್ತಾರೆ. ಆಮೇಲೆ ಹೆಣ್ಣಿನ ಕಡೆಯವರು ಕೊಟ್ಟ ವೀಳ್ಯವನ್ನು ಗಂಡಿನ ಕಡೆಯವರು ತಂದ ವೀಳ್ಯವನ್ನು ಅದಲು ಬದಲು ಮಾಡಿಕೊಳ್ಳುತ್ತಾರೆ. ಮದುವೆ ಇಂಥ ದಿನವೆಂಬುದಾಗಿ ಜೋಯಿಸರು ನಿರ್ಧರಿಸಿ ಲಗ್ನ ಕಟ್ಟಿಕೊಡುತ್ತಾರೆ. ಲಗ್ನ ಎಂಟು ದಿನ ಇದೆ ಎನ್ನುವಾಗ ಮೂರು ಜನ ಮುತ್ತೈದೆಯರು ಒರಳುಕಲ್ಲಿನ ಸುತ್ತ ಸಾರಿಸಿ, ರಂಗೋಲೆ ಬಿಟ್ಟು ಪೂಜೆ ಮಾಡಿ ಎಲೆ, ಅಡಿಕೆ, ಚಿಗಣಿ, ಬಾಳೆಹಣ್ಣು, ನೆನೆಯಕ್ಕಿ, ನೆನೆಗಡಲೆ, ತಂಬಿಟ್ಟು, ಅಕ್ಷತೆಗಳನ್ನೆಲ್ಲ ಎಡೆಮಾಡುತ್ತಾರೆ. ಒನಕೆಗಳನ್ನು ತೊಳೆದು ವಿಭೂತಿ ಹೆಚ್ಚು ಅರಿಶಿನದ ಕೊನೆ ಹಾಗೂ ವೀಳೆಯದೆಲೆಗಳನ್ನು ಹಸಿನೂಲಿನಿಂದ ಅದಕ್ಕೆ ಕಟ್ಟುತ್ತಾರೆ. ಮೂರು ಜನ ಮುತ್ತೈದೆಯರು :

ಸುವ್ವಾ ಬಾ
ಸುವ್ವಿ ಸುವ್ವಾ ಬಾ| ಸೊಲ್ಲು|
ಕೊಟ್ಟಣದಕ್ಕಿ ಕುಟ್ಟಾಡುವಾಗ
ಮುತ್ತೈದೆರೆಲ್ಲ ಮಡಿಲದುಂಬಿ|

ಮುಂತಾಗಿ ಹಾಡುತ್ತ ಬತ್ತವನ್ನು ಕುಟ್ಟಿ ಇಟ್ಟುಕೊಳ್ಳುತ್ತಾರೆ. ಈ ಬತ್ತ ಬೆರೆತ ಅಕ್ಕಿಯನ್ನು ಮುಹೂರ್ತದ ಸಮಯದಲ್ಲಿ ಮದುಮಕ್ಕಳ ಮೇಲೆ ಎರಚಲು ಉಪಯೋಗಿಸುತ್ತಾರೆ. ಮದುವೆ ಸಾಮಾನ್ಯವಾಗಿ ಗಂಡಿನ ಮನೆಯಲ್ಲೇ ನಡೆಯುತ್ತದೆ. ಮದುವೆ ನಾಳೆ ಎನ್ನುವಾಗ ಹೆಣ್ಣಿನ ಮನೆಯಲ್ಲಿ ವೀಳೇಶಾಸ್ತ್ರ ಮಾಡುತ್ತಾರೆ. ಗಂಡಿನ ಮನೆಯಿಂದ ಮಂಗಳ ದ್ರವ್ಯಗಳನ್ನು ತಂದಿದ್ದ ಮುತ್ತೈದೆಯರು ಹೆಣ್ಣನ್ನು ಹಸೆಕೂರಿಸಿ ಅನಂತರ ಗಂಡಿನ ಮನಗೆ ಕರೆದುಕೊಂಡು ಹೋಗುತ್ತಾರೆ. ಗಂಡಿನ ಮನೆಯಲ್ಲಿ ಮಡಿವಾಳಿಪತ್ತು, ವಾಲಗ, ನಡೆಮುಡಿಗಳೊಡನೆ ಶಾಸ್ತ್ರದ ನೀರು ತರುತ್ತಾರೆ. ಅರಣಿಪೂಜೆಯಾದ ಮೇಲೆ ಹೆಣ್ಣು ಹಾಗೂ ಗಂಡಿಗೆ ಅರಿಸಿನೆಣ್ಣೆ ಸ್ನಾನ ಮಾಡಿಸುತ್ತಾರೆ. ಮಾರನೆಯ ದಿನ ಬೆಳಗ್ಗೆ ವೀರಭದ್ರನ ಪಳ್ಳೆಯ ಎಂಬ ಶಾಸ್ತ್ರ ನಡೆಯುತ್ತದೆ. ಇವರ ಗುರುಗಳು ಹೆಣ್ಣುಗಂಡುಗಳಿಗೆ ಲಿಂಗಧಾರಣೆ ಮಾಡುತ್ತಾರೆ. ಹೆಣ್ಣುಗಂಡುಗಳು ಬಿಲ್ಪತ್ರೆಯಿಂದ ಕಟ್ಟಿದ ಸಂಬಂಧಮಾಲೆಯನ್ನು ಧಾರೆಗೆ ನಿಂತಾಗ ಅದಲು ಬದಲು ಮಾಡಿಕೊಳ್ಳುತ್ತಾರೆ.  ಹಾಲು ತುಪ್ಪವಿರುವ ಕರಗವನ್ನು ಪೂಜೆ ಮಾಡಿ ಧಾರೆ ಎರೆಯುತ್ತಾರೆ. ಅವರ ಜಾತಿಯ ಮುಖಂಡನೇ ಈ ಶಾಸ್ತ್ರಗಳನ್ನೆಲ್ಲ ನಡೆಸುತ್ತಾನೆ. ತಾಳೀಕಟ್ಟಿದ ಮೇಲೆ:

`ಹನ್ನೆರಡು ಕಂಬ ಕಂಡ?' `ಕಂಡೆ
`ಹನ್ನೆರಡು ಕುಂಬ ಕಂಡ?' `ಕಂಡೆ
`ಚಂದ್ರನ ಕಂಡ?' `ಕಂಡೆ
`ಸೂರ್ಯನ ಕಂಡ? `ಕಂಡೆ
`ಮುತ್ತು ಕಂಡ?' `ಕಂಡೆ
`ಮುಗುಲು ಕಂಡ?' `ಕಂಡೆ
`ಮುತ್ತುನಂತ ಗಂಡನ ಕಂಡ?' `ಕಂಡೆ
`ಮುಖ ನೋಡಿ ಹೆಸರು ಹೇಳು.

ಎಂಬ ಪ್ರಶ್ನೋತ್ತರಗಳನ್ನು ಜೋಯಿಸ ಮದುಮಕ್ಕಳಿಂದ ಹೇಳಿಸುತ್ತಾನೆ. ಇದಾದ ಮೇಲೆ ಅರಣಿಗಡಿಗೆಗಳನ್ನು ಹೊತ್ತುಕೊಂಡು ಎಕ್ಕದಗಿಡಕ್ಕೆ ಅರಳಿಮರಕ್ಕೆ ಪೂಜೆ ಮಾಡಿ ಅದರ ಬುಡ್ಡಕ್ಕೆ ಸುರುವಿ, ಹುತ್ತಕ್ಕೆ, ಹಾಲೆರೆದು ಪೂಜೆ ಮಾಡಿ ಹುತ್ತದ ಮಣ್ಣನ್ನು ಸ್ವಲ್ಪ ತೆಗೆದುಕೊಂಡು ಬಂದು ಚಪ್ಪರದ ಕಂಬದ ಬುಡಕ್ಕೆ ಹಾಕುತ್ತಾರೆ.

ಗರ್ಭಿಣಿಯಾದ ಹೆಣ್ಣುಮಕ್ಕಳಿಗೆ 7ನೆಯ ತಿಂಗಳಿಗೆ ಸೀಯೂಟ ಮಾಡಿಟ್ಟು ಮಡಿಲಕ್ಕಿ ಹೂದು ತವರಿಗೆ ಕಳಿಸಿಕೊಡುತ್ತಾರೆ. ಸೋಮವಾರ ಗಂಡುಮಕ್ಕಳು ಶುಕ್ರವಾರ ಹೆಣ್ಣುಮಕ್ಕಳು ಹುಟ್ಟಿದರೆ ಒಳ್ಳೆಯದೆಂದು ನಂಬುತ್ತಾರೆ. ಹೆರಿಗೆಯಾದ ಹನ್ನೆರಡು ದಿನಗಳವರೆಗೆ ಮನೆಯ ಹೊರಗೆ ನೆರಕೆಯಲ್ಲಿ ಬಾಣಂತಿಯನ್ನಿರುಸಿರುತ್ತಾರೆ. ಮೂರನೆಯ ದಿನ ಮಗುವಿಗೂ ಬಾಣಂತಿಗೂ ಸ್ನಾನ ಮಾಡಿಸುತ್ತಾರೆ. ಮನೆಮುಂದೆ ಸ್ವಲ್ಪ ಗುಂಡಿ ತೋಡಿ ಅದರೊಳಕ್ಕೆ ಒಂದು ಕೋಲುಗಳ್ಳಿ ಕೊನೆ ಮಡಗಿ ಅದರ ಸುತ್ತ ಹಣ್ಣು, ಕಾಯಿ, ಅನ್ನ, ಸಾರು, ಸಿಹಿತಿಂಡಿಗಳಿಟ್ಟು ಕುಂಕುಮ ಅರಿಶಿನ ಉದುರಿಸಿ ಪೂಜೆ ಮಾಡಿ ಅದೇ ಮಣ್ಣಿನಿಂದ ಮುಚ್ಚಿಬಿಡುತ್ತಾರೆ. ಇದರಿಂದ ಮಗು ಬಾಣಂತಿಯರಿಗೆ ಶಾಂತಿ ಮಾಡಿದಂತಾಯಿತು ಎಂದು ನಂಬುತ್ತಾರೆ. ಅದೇ ದಿನ ಮಡಿವಾಳ ಬಂದು ಬಟ್ಟೆ ಮಡಿ ಮಾಡಿಕೊಡುತ್ತಾನೆ. ಇದರಿಂದ ಸೂತಕ ಪರಿಹಾರವಾಯಿತೆಂದು ಭಾವಿಸುತ್ತಾರೆ. ಮೂರು ಜನ ಗಂಡಸರು ಒಬ್ಬರಾದ ಮೇಲೆ ಒಬ್ಬರು ಮಗುವನ್ನು ಎತ್ತಿಕೊಂಡು ಆ ಮಗುವಿನ ನಕ್ಷತ್ರಕ್ಕೆ ಒಂದ ಹೆಸರನ್ನು ಅದರ ಕಿವಿಯಲ್ಲಿ ಉರುಬಿ ಹೇಳುತ್ತಾರೆ. ಗಂಡುಮಕ್ಕಳಾದರೆ ಸಾಮಾನ್ಯವಾಗಿ ವೀರಭದ್ರ, ನಂಜಪ್ಪ, ಶಂಕರಯ್ಯ ಸುಬ್ರಹ್ಮಣ್ಯ ಗಂಗಯ್ಯ ಮುನಿಯಪ್ಪ ಲಿಂಗಯ್ಯ ಮುಂತಾಗಿ ಹೆಸರಿಟ್ಟು ಕರೆಯುತ್ತಾರೆ. ಹೆಣ್ಣು ಮಕ್ಕಳಾದರೆ ನಂಜಮ್ಮ, ಮುನಿಯಮ್ಮ, ಭದ್ರಮ್ಮ ಗಂಗಮ್ಮ ರುದ್ರಮ್ಮ ಕಾಳಮ್ಮ ಹುಚ್ಚಮ್ಮ ಮುಂತಾಗಿ ಕರೆಯುತ್ತಾರೆ. ಮಗುವಿಗೆ ಮೂರು ತಿಂಗಳು ತುಂಬಿದ ಮೇಲೆ ಐದು ಜನ ಮುತ್ತೈದೆಯರೊಡನೆ ಮಗು-ಬಾಣಂತಿ ಹೋಗಿ ಗಂಗೆ ಪೂಜೆ ಮಾಡಿ ಮುತ್ತೈದೆಯರಿಗೆ ಹೂವು ಹಣ್ಣು ಅಕ್ಕಿ ತಂಬಿಟ್ಟು ಎಲೆಅಡಿಕೆ ಬಳೆ ಮುಂತಾದವನ್ನು ಮಡಿಲು ತುಂಬಿ ನಮಸ್ಕರಿಸುತ್ತಾರೆ. 

ಮರಣಕ್ಕೆ ಸಂಬಂಧಿಸಿದ ಆಚರಣೆಗಳಲ್ಲಿ ಇವು ಕೆಲವು. ಜೀವಹೋದ ಕೂಡಲೆ ಕೈಕಾಲು ಮುರಿದು ಮಲಗಿಸಿ ಶವದ ಬಾಯಿಗೆ ತಾಂಬೂಲ ತುಂಬುತ್ತಾರೆ. ಸತ್ತ ಸುದ್ದಿ ತಿಳಿಯಲು ಮನೆ ಮುಂದೆ ಬೆಂಕಿ ಹಾಕುತ್ತಾರೆ. ಒಂದು ಮಡಕೆಯಲ್ಲಿ ಅರಿಶಿನ ಬೆರೆಸಿ ಅಕ್ಕಿ ಬೇಯಲಿಡುತ್ತಾರೆ. ಹೆಣಕ್ಕೆ ಮೈ ತೊಳೆದು ಮೈಗೆಲ್ಲ ವಿಭೂತಿ ಪೂಸಿ ಹಿರಿಯಮಗನ ಕೈಲಿ ಪೂಜೆ ಮಾಡಿಸುತ್ತಾರೆ. ಹೆಣಕ್ಕೆ ತೊಡಿಸಿದ ಬಟ್ಟೆಯ ಸೆರಗೇ ಶಿವಸೆರಗು. ಅದಕ್ಕೆ ಒಂದು ಪಾವಲಿ ಹಾಗೂ ಒಂದು ಸ್ಯಾರೆ ಅಕ್ಕಿಯನ್ನು ಕಟ್ಟುತ್ತಾರೆ. ಹಿಂಡೇಕೂಳನ್ನು ಹಿರಿಯಮಗ ಮಧ್ಯದಾರಿಯಲ್ಲಿ ಹೆಣದ ಬೆನ್ನಿನ ಕಡೆಗೆ ಕುಕ್ಕಿ ಹಿಂದಿರುಗಿ ನೋಡದೆ ಮುಂದಕ್ಕೆ ಹೋಗುತ್ತಾನೆ. ಆಗ ಹೆಣ ಹೊತ್ತಿದ್ದ ಮುಂದಿನವರು ಹಿಂದಕ್ಕೂ ಹಿಂದಿನವರೂ ಮುಂದಕ್ಕೂ ಒಂದು ಹೆಗಲು ಬದಲಿಸಿಕೊಳ್ಳುತ್ತಾರೆ. ಹೂಳುವುದೇ ಸಾಮಾನ್ಯವಾಗಿರುವುದರಿಂದ ತೋಡಿರುವ ಗುಂಡಿಗೆ ಸಗಣಿ ನೀರನ್ನು ಚಿಮುಕಿಸಿ ಹೂವೆರಚಿ ಅದರ ಮೇಲೆ ಹೆಣದ ತಲೆಯನ್ನು ತೆಂಕಲಿಗಿಟ್ಟು ಮಣ್ಣು ಮಾಡುತ್ತಾರೆ. ಆಮೇಲೆ ಗುದ್ದಲಿಯನ್ನು ತಲೆಕೆಳಗು ಮಾಡಿ ಮೂರು ಸಲ ಗುಂಡಿಯ ಮಣ್ಣನನು ಅತ್ತಿತ್ತ ಎಸೆಯುತ್ತಾರೆ. ಆಗಲೇ ಒಂದು ತುಂಬೆ ಗಿಡವನ್ನು ಮೂರು ಸಣ್ಣಕಲ್ಲುಗಳನ್ನು ಜೋಡಿಸಿ ಗುಂಡಿಯ ಮೇಲೆ ನೆಡುತ್ತಾರೆ. ಮುಂದೆ ತುಂಬೆಗಿಡ ಚಿಗುರಿದರೆ ಸತ್ತವನಿಗಿನ್ನೂ ಆಯುಷ್ಯವಿತ್ತೆಂದು ಭಾವಿಸುತ್ತಾರೆ. ಸಶ್ಮಾನದಿಂದ ಹಿಂದಿರುಗಿ ಬಂದವರು ಸಗಣಿ ನೀರನ್ನು ತಲೆಮೇಲೆ ಚಿಮುಕಿಸಿಕೊಂಡು ಸ್ನಾನ ಮಾಡಿ ಅನಂತರ ಮನೆಯೊಳಕ್ಕೆ ಬರುತ್ತಾರೆ. ಸತ್ತವರ ಮನೆಯಲ್ಲಿ ಹಚ್ಚಿಟ್ಟಿದ್ದ ದೀಪಕ್ಕೆ ಎಲ್ಲರೂ ಕೈಮುಗಿದು ತಮ್ಮ ತಮ್ಮ ಮನೆಗಳಿಗೆ ಹೊರಡುತ್ತಾರೆ. ಮೂರನೆಯ ದಿನ ಸೀ ಅಡಿಗೆ ಮಾಡಿ ಗುಂಡಿಯ ಬಳಿಗೆ ತಂದು ಎಡೆ ಮಾಡುತ್ತಾರೆ. ಅದನ್ನು ಕಾಗೆ ಮುಟ್ಟಬೇಕು ಮುಟ್ಟದಿದ್ದರೆ ಗೋವುಗಳಿಗೆ ತಿನ್ನಿಸುತ್ತಾರೆ; ಇಲ್ಲವೆ ಗಂಗೆ ಬಿಡುತ್ತಾರೆ. ಹನ್ನೆರಡನೆಯ ದಿನಕ್ಕೆ ತಿಥಿ ಮಾಡುತ್ತಾರೆ. ಸತ್ತವ ಗಂಡಸಾಗಿ ಆತನಿಗೆ ಹೆಂಡತಿಯಿದ್ದರೆ ಸೀ ಅಡಿಗೆ ಮಾಡಿ ಆಕೆಯನ್ನು ಹಸೆ ಕೂರಿಸಿ ಮುತ್ತೈದೆಯರು ಪೂಜೆ ಮಾಡುತ್ತಾರೆ. ಅನಂತರ ಅವಳನ್ನು ಗುಂಡಿಯ ಬಗಳಿಗೆ ಕರೆತಂದು ಮಾಡಿರುವ ಅಡಿಗೆಯನ್ನು ಎಡೆ ಮಾಡಿ ಪೂಜೆ ಸಲ್ಲಿಸುತ್ತಾರೆ. ಅನಂತರ ಅವಳ ತೋಳುಗಳನ್ನು ಗುಂಡಿಯ ಮೇಲೆ ಊರಿ ಮೂರು ಜನ ವಿಧವೆಯರು ಆಕೆಯ ಬಳೆಗಳನ್ನು ಒಡೆಯುತ್ತಾರೆ; ಕುಂಕುಮ ಅಳಿಸುತ್ತಾರೆ; ಕರಿಮಣಿ ಕಿತ್ತು ಹಾಕುತ್ತಾರೆ. 

	ತೆಲಗು ಜಂಗಮರು ಹಾಡುವ ಹಾಡುಗಳು ಬಾಲನಾಗಮ್ಮ, ಗಂಗೇಗೌರಿ ಜಗಳ, ನಂಜುಡೇಶ್ವರ, ಅಣ್ಣ-ತಂಗಿ, ಕೆಂಪೇಗೌಡ ಲಾವಣಿ ಮುಂತಾದವು. ಇವನ್ನೇ ತೆಲುಗು ಬಣಜಿಗರೂ ದೊಂಬಿದಾಸರೂ ಹಾಡುತ್ತಾರೆ.	(ಪಿ.ಕೆ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ